ನಹಪಾನ -
ಕ್ಷಹರಾತ (ರಕ) ವಂಶದ ಪ್ರಸಿದ್ಧ ದೊರೆ. ಗೌತಮೀಪುತ್ರ ಸಾತಕರ್ಣಿಯ ಹಿರಿಯ ಸಮಕಾಲೀನ. ಸುಮಾರು 119-125 ಈತನ ಉಚ್ಛ್ರಾಯ ಕಾಲವೆಂದು ತಿಳಿದುಬರುತ್ತದೆ. ಕ್ಷಹರಾತ ಮನೆತನದ ಭೂಮುಖನ ತರುವಾಯ ಈತ ಕ್ಷತ್ರಪನಾದಂತೆ ತೋರುತ್ತದೆ. ಶಾಸನ ಮತ್ತು ನಾಣ್ಯಗಳಿಂದ ಇವನಿಗೆ ಸಂಬಂಧಿಸಿದ ಸಂಗತಿ ತಿಳಿದುಬರುತ್ತದೆ. ತನ್ನ ಆಳ್ವಿಕೆಯ ಪ್ರಾರಂಭದಲ್ಲಿ ನಹಪಾನ ಕೇವಲ ಸತ್ರಪ ಎಂಬ ಬಿರುದು ಹೊಂದಿದ್ದ. ಕ್ರಮೇಣ ರಾಜ್ಯವನ್ನು ವಿಸ್ತರಿಸಿ ಮಹಾಕ್ಷತ್ರಪ ಮತ್ತು ರಾಜನ್ ಎಂಬ ಬಿರುದುಗಳನ್ನು ಧರಿಸಿದ. ಈತನ ರಾಜ್ಯ ರಾಜಪುಟಾಣದ ದಕ್ಷಿಣದ ಗಡಿಯಿಂದ ನಾಸಿಕ್‍ವರೆಗೂ ವಿಸ್ತರಿಸಿತ್ತು. ಸೌರಾಷ್ಟ್ರ ಇವನ ರಾಜ್ಯದ ಭಾಗವಾಗಿತ್ತು. ಈತನ ಮಗಳೂ ದಕ್ಷಮಿತ್ರಳನ್ನು ಉಷವದಾತ (ಋಷಭದತ್ತ) ಎಂಬುವನು ಮದುವೆಯಾಗಿದ್ದ. ಉಷವದಾತ ಮತ್ತು ದಕ್ಷಮಿತ್ರರು ಹಾಕಿಸಿದ ಶಾಸನಗಳಿಂದ ಆಗಿನ ಕಾಲದ ಅನೇಕ ಸಂಗತಿಗಳು ತಿಳಿದುಬರುತ್ತವೆ. ನಹಪಾನ ಪರಕೀಯ ಮೂಲದವನಾದರೂ ಭಾರತೀಯ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿದ್ದ. ಈತನ ಬೆಳ್ಳಿ ಮತ್ತು ತಾಮ್ರ ನಾಣ್ಯಗಳ ಮೇಲೆ ಬಾಣ, ಸಿಡಿಲು ಮತ್ತು ಚಕ್ರಗಳ ಚಿಹ್ನೆಗಳೂ ಬ್ರಾಹ್ಮೀ ಮತ್ತು ಖರೋಷ್ಠೀ ಲಿಪಿಯಲ್ಲಿ ರಾಜನ್ ಮತ್ತು ಕ್ಷತ್ರಪ ಎಂಬ ಬಿರುದುಗಳೂ ಇವೆ. ಮಿನ್ನಾಗರ ಎಂಬುದು ಇವನ ರಾಜಧಾನಿಯಾಗಿತ್ತು. ಅದು ವ್ಯಾಪಾರಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಆದರೆ ಆ ಪಟ್ಟಣವನ್ನು ಸರಿಯಾಗಿ ಗುರುತಿಸಲಾಗಿಲ್ಲ. ಈತನ ಆಳ್ವಿಕೆಯ ಕೊನೆಯ ವೇಳೆಗೆ ಗೌತಮೀಪುತ್ರ ಸಾತಕರ್ಣಿ ಸಾತವಾಹನ ಸಾಮ್ರಾಟನಾಗಿ ರಾಜ್ಯವಿಸ್ತರಣೆಯಲ್ಲಿ ತೊಡಗಿದ. ಅವನು ಶಕ, ಯವನ ಮತ್ತು ಕ್ಷತ್ರಪರನ್ನು ನಿರ್ನಾಮ ಮಾಡಿದುದಾಗಿ ಶಾಸನಗಳಿಂದ ತಿಳಿದುಬರುತ್ತದೆ. ಆದ್ದರಿಂದ ಗೌತಮೀಪುತ್ರನಿಂದ ನಹಪಾನ ಸೋತಿರಬೇಕು. ನಾಣ್ಯಗಳೂ ಈ ಸಂಗತಿಯನ್ನು ಖಚಿತಪಡಿಸುತ್ತವೆ. ಕ್ಷತ್ರಪರನ್ನು ಗೌತಮೀಪುತ್ರ ಸೋಲಿಸಿದ ಅನಂತರ ನಹಪಾನನ ಪ್ರಚಲಿತ ನಾಣ್ಯಗಳ ಮೇಲೆ ಅವನು ತನ್ನ ಅಂಕಿತವನ್ನು ಮುದ್ರಿಸಿದ. ಜೋಗಲಥಂಬಿಯಲ್ಲಿ ಇಂಥ ಪುನರ್‍ಮುದ್ರಿತ ನಾಣ್ಯಗಳು ಸಹಸ್ರಾರು ಸಂಖ್ಯೆಯಲ್ಲಿ ದೊರೆತಿವೆ. ನಹಪಾನನ ಅನಂತರ ಕ್ಷಹರಾತ ವಂಶ ಕೊನೆಗೊಂಡಂತೆ ತೋರುತ್ತದೆ.	
	(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ